ಧೋಂಡೊ ನರಸಿಂಹ ಮುಳಬಾಗಿಲ
1848 - 1896.  ಹೊಸಗನ್ನಡದ ಅರುಣೋದಯ ಕಾಲದಲ್ಲಿ ಭಾಷಾಸೇವೆ ಮಾಡಿದವರು. ನೂರಾರು ವಿದ್ಯಾರ್ಥಿಗಳಿಗೆ ಕನ್ನಡ ದೀಕ್ಷೆಯನ್ನು ಕೊಟ್ಟವರು. ಧಾರವಾಡದ ಟ್ರೇನಿಂಗ್ ಕಾಲೇಜಿನಲ್ಲಿ ಶಿಕ್ಷಣ ಪಡೆದ ಇವರು ಮೂರು ದಶಕಗಳ ಕಾಲ ಅಧ್ಯಾಪಕವೃತ್ತಿಯಲ್ಲಿದ್ದರು. ಇವರ ಕನ್ನಡ ಭಾಷಾಪರಿಣಿತಿಯನ್ನೂ ಕಂಡು, ಆಗಿನ ಮುಂಬಯಿ ಸರ್ಕಾರದ ಶಿಕ್ಷಣಖಾತೆ 1882 ರಲ್ಲಿ ಇವರನ್ನು ಟ್ರೇನಿಂಗ್ ಕಾಲೇಜಿನ ಕನ್ನಡ ಅಧ್ಯಾಪಕರಾಗಿ ನೇಮಕ ಮಾಡಿತು. ಆಗ ಉತ್ತರ ಕರ್ನಾಟಕ ಸಾಂಸ್ಕøತಿಕ ವಾತಾವರಣದಲ್ಲಿ ಮರಾಠಿಯ ಗಾಳಿ ಭರದಿಂದ ಬೀಸುತ್ತಿತ್ತು. ಇವರು ನೂರಾರು ಶಿಕ್ಷಕ ವಿದ್ಯಾರ್ಥಿಗಳಿಗೆ ಕನ್ನಡ ದೀಕ್ಷೆಯನ್ನಿತ್ತುದಲ್ಲದೆ ಗ್ರಾಮಾಂತರದಲ್ಲಿಯೂ ಕನ್ನಡಾಭಿಮಾನ ನೆಲೆಗೊಳ್ಳುವುದಕ್ಕೆ ಕಾರಣರಾದರು. ತಮ್ಮ ವೈದುಷ್ಯ ಹಾಗೂ ಸಾತ್ತ್ವಿಕ ಸ್ವಭಾವದಿಂದಾಗಿ ಇವರು ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಗುರುಗಳಾಗಿದ್ದರು.

ಇವರ ಒಲವು ಪದ್ಯರಚನೆಯ ಕಡೆಗೆ ಹೆಚ್ಚಾಗಿತ್ತು. ತೇಜೋನೃಸಿಂಹ ಎಂಬುದು ಇವರ ಕಾವ್ಯನಾಮ. ಹಿತೋಪದೇಶವನ್ನು ಕಾವ್ಯರೂಪದಲ್ಲಿ ರಚಿಸಿದ್ದುದು ಇವರ ಮೊದಲ ಕೃತಿಯೆಂದು ತೋರುತ್ತದೆ. ಸಾಮಾನ್ಯ ಜನರ ಮನೋರಂಜನಾರ್ಥವಾಗಿ ಕನ್ನಡದಲ್ಲಿ ಗ್ರಂಥಗಳಿಲ್ಲ ಎಂಬುದನ್ನು ಮನಗಂಡು, ಸಂಸ್ಕøತ ನಾಟಕಗಳನ್ನು ಇವರು ಅನುವಾದಿಸ ಬಯಸಿದರು. ಭವಭೂತಿಯ ಉತ್ತರರಾಮಚರಿತ್ರೆ ಮೊದಲಿಗೆ ಉಳಿದಿದ್ದ ಇದಕ್ಕೆ ಸರ್ಕಾರದಿಂದ 200 ರೂ. ಬಹುಮಾನ ದೊರೆತುದರಿಂದ ಅನಂತರ ಇದು ಪ್ರಕಟವಾಯಿತು. ಅದೇ ಸ್ಥಾಪನೆಗೊಂಡಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘ ಈ ಕೃತಿಯನ್ನೂ ಬೇರೆ ಕೆಲವನ್ನೂ ಪ್ರಕಟಿಸಿ, ಇವರ ಗ್ರಂಥರಚನೆಗೆ ಪ್ರೋತ್ಸಾವನ್ನಿತ್ತಿತು.

ಮುಂದಿನ ನಾಟಾಕಾನುವಾದ ವೇಣೀಸಂಹಾರ (1883). ಇದರ ಎರಡನೆಯ ಮುದ್ರಣದ 250 ಪ್ರತಿಗಳನ್ನು ಕೊಂಡು ಸರ್ಕಾರ ಮತ್ತೊಮ್ಮೆ ಇವರ ಕೃತಿರಚನೆಗೆ ಚಾಲನೆ ಕೊಟ್ಟಿತು. ಮೃಚ್ಛಕಟಿಕ ಹಾಗೂ ಮಾಳವಿಕಾಗ್ನಿಮಿತ್ರ ಇವುಗಳ ಅನುವಾದಗಳು 1890 ರಲ್ಲಿ ಹೊರಬಂದವು.

ವ್ಯಾಕರಣ, ಛಂದಸ್ಸುಗಳ ಮೇಲೆ ಅಚ್ಚುಕಟ್ಟಾದ ಹಾಗೂ ವ್ಯವಸ್ಥಿತವಾದ ನಿರೂಪಣೆಯುಳ್ಳ ಗ್ರಂಥಗಳನ್ನೂ ಇವರು ಬರೆದಿದ್ದಾರೆ. ಇವರ ಕನ್ನಡ ಕೈಪಿಡಿ (1890) ಕನ್ನಡ ವ್ಯಾಕರಣವನ್ನು ವಿಸ್ತಾರವಾಗಿ ಪ್ರತಿಪಾದಿಸುತ್ತದೆ. ಹಳೆಯ ವ್ಯಾಕರಣ ಪ್ರಕ್ರಿಯೆಗಳನ್ನು ವಿಸ್ತಾರವಾಗಿ ಪ್ರತಿಪಾದಿಸುತ್ತದೆ. ಹಳೆಯ ವ್ಯಾಕರಣ ಪ್ರಕ್ರಿಯೆಗಳನ್ನು ಹೊಸಕಾಲದ ಭಾಷೆಗೆ ಸಮನ್ವಯಗೊಳಿಸಿದುದು ಇದರ ವೈಶಿಷ್ಟ್ಯ. ಇದರಲ್ಲಿ ಅನೇಕ ಕಡೆ ಇವರ ಸ್ವತಂತ್ರ ವಿಚಾರಸರಣಿ ಎದ್ದು ಕಾಣುತ್ತದೆ. ವ್ಯಾಕರಣ ಕ್ಷೇತ್ರದಲ್ಲಿ ಇದೊಂದು ಹಿರಿಯ ಕೃತಿ. ಕೆಳವರ್ಗಗಳ ವಿದ್ಯಾರ್ಥಿಗಳಿಗಾಗಿ ಸುಲಭ ಮತ್ತು ಸಂಕ್ಷಿಪ್ತರೂಪದಲ್ಲಿ ಬರೆಯಲಾದ ನುಡಿಗಟ್ಟು (1892) ಇವರ ಇನ್ನೊಂದು ಕೃತಿ. ಮೈಸೂರು ಕಡೆಯಲ್ಲಿ ಬಿ. ಮಲ್ಲಪ್ಪನವರ ಶಬ್ಧಾದರ್ಶಕ್ಕೆ ಇದ್ದ ಮಹತ್ತ್ವ ಉತ್ತರ ಕರ್ನಾಟಕದಲ್ಲಿ ಇದಕ್ಕೆ ಇತ್ತು.

ಇನ್ನೂ ನೌಕರಿಯಲ್ಲಿರುವಾಗಲೆ ತಮ್ಮ 49 ನೆಯ ವಯಸ್ಸಿನಲ್ಲಿ ಇವರು ದೈವಾಧೀನರಾದರು.		(ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ